ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾನೂನು ಬಾಹಿರವಾಗಿ ಸಂಚರಿಸುವಂತಹ ವಾಹನಗಳ ತನಿಖೆ

ಕಾನೂನು ಬಾಹಿರವಾಗಿ ಸಂಚರಿಸುವಂತಹ ವಾಹನಗಳ ತನಿಖೆ

Tue, 20 Apr 2010 13:45:00  Office Staff   S.O. News Service

ಬೆಂಗಳೂರು, ಏಪ್ರಿಲ್ ೨೦, ಕೆಲವು ಮಜಲು ವಾಹನ ಮಾಲೀಕರು ರಾಜ್ಯ ಸಾರಿಗೆ ಪ್ರಾಧಿಕಾರ/ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಂದ ಮಜಲು ವಾಹನ ರಹದಾರಿಗಳನ್ನು ಪಡೆದು ಆ ನಂತರ ಮೋಟಾರು ವಾಹನ ಕಾಯ್ದೆ ೧೯೮೮ ಪ್ರಕರಣ ೮೩ ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾವಳಿ ೧೯೮೯ ನಿಯಮ ೭೯ ರ ಅಡಿಯಲ್ಲಿ ರಹದಾರಿಯಿಂದ ವಾಹನಗಳನ್ನು ಬಿಡುಗಡೆಗೊಳಿಸಿ ಅಂತಹ ವಾಹನಗಳ ವಾಸ್ತವಿಕ ಸ್ಥಿತಿಯನ್ನು ಸಾರಿಗೆ ಪ್ರಾಧಿಕಾರಿಗಳ ಗಮನಕ್ಕೆ ತರದೆ ಬೇರೆ ಮಾರ್ಗಗಳ ರಹದಾರಿಗಳಲ್ಲಿ ಅಳವಡಿಸಿ ಸಂಚರಿಸುತ್ತಿರುವುದು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿರುತ್ತದೆ.  ಇಂತಹ ಸಂದರ್ಭದಲ್ಲಿ ಆ ಮಾರ್ಗದಲ್ಲಿ ಸಂಚರಿಸುವಂತಹ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತದೆ.  ಆ ಪ್ರಯಾಣಿಕರು ಬೇರೆ ವಾಹನಗಳಾದ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಇತರೆ ಅನಧಿಕೃತ ವಾಹನಗಳಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.  ಈ ಹಿನ್ನೆಲೆಯಲ್ಲಿ  ಸಾರಿಗೆ ಇಲಾಖೆಯು ವಿಶೇಷ ತಪಾಸಣೆ ಕಾರ್ಯವನ್ನು ಕೈಗೊಂಡಿದ್ದು ಅನಧಿಕೃತ ಮಾರ್ಗ, ಮಾರ್ಗ ಬದಲಾವಣೆ, ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಂಚರಿಸುವಂತಹ ವಾಹನಗಳನ್ನು ತನಿಖೆ ಮಾಡಿ ಮೋಟಾರು ವಾಹನ ಕಾಯ್ದೆ, ಪ್ರಕರಣ ೫೩ (೧) (ಬಿ) ಅಡಿಯಲ್ಲಿ ನೋಂದಣಿ ಅಮಾನತ್ತು, ರಹದಾರಿಯ ಅಮಾನತ್ತು ಹಾಗೂ ರಹದಾರಿಯ ರದ್ದತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಆದುದರಿಂದ ಒಂದೇ ವಾಹನವನ್ನು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಮಾರ್ಗಗಳ ರಹದಾರಿಗಳಿಗೆ ಅಳವಡಿಸಿ ಮಜಲು ವಾಹನಗಳನ್ನು ಓಡಿಸುವಂತಹ ರಹದಾರಿಗಳ ಮೇಲೆ ಅತ್ಯಂತ ಕಠಿಣ ಕ್ರಮ ಕೈಗೊಂಡು ಅಂತಹ ರಹದಾರಿಗಳ ಅಮಾನತ್ತು ಮತ್ತು ರದ್ದುಗೊಳಿಸುವ ಬಗ್ಗೆ ತೀವ್ರ ಕ್ರಮ ಕೈಗೊಳ್ಳಲಾಗುವುದೆಂದು ಮಜಲು ರಹದಾರಿ ಮಾಲೀಕರಿಗೆ   ರಾಜ್ಯ ಸಾರಿಗೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ.


Share: